ಸೋಮವಾರ, ಏಪ್ರಿಲ್ 8, 2013

ನಾವು ಬರೆಯುವುದಾದರು ಏತಕ್ಕೆ? - II

 

1. ಈಶ್ವರ ಭಟ್ . 

ಕಾವ್ಯ ಜೀವನಪ್ರೀತಿ

****************
 ನನಗೆ ನೋವಿನ ಎಳೆಯು ಮಂಜಾಗಿ ಕಾಣುವುದು
ನಲಿವೇನೋ ಹೊಮ್ಮುವುದು ಬೆಳಕಿನಂತೆ
ನಾನು ಬರೆಯುವ ಹಾಡಿಗಿನ್ನೆಷ್ಟು ತುಂಬುವುದು?
ಬದುಕು ನೋವ್ ನಲಿವುಗಳ ದೊಡ್ಡ ಸಂತೆ

ಕವನ ಜನಿಸುವ ಸಮಯ ನಿಶ್ವಿಂತನಾಗುವೆನು
ಕವನ ಕೇಳುವ ನೆಪದಿ ಮಾತು ಮರೆವೆ
ಕಚ್ಚುವುದು ಬೆಚ್ಚುವುದು ನುಡಿಯ ಆವೇಶಕ್ಕೆ
ಕವಿಗೇನ್ ಮಣಿಯುವುದು; ನುಡಿಗೆ ಮಣಿವೆ

ಪೂರ್ವಸೂರಿಗಳೆಲ್ಲ ರಮ್ಯದಲಿ ನವ್ಯದಲಿ 
ಹೇಳಿದ್ದು ಬಹಳಷ್ಟು ಗಳಿಕೆ ಶೂನ್ಯ!
ನೋಟುಗಳ ಕಟ್ಟಿನಲಿ ಮನುಜ ನಿದ್ರಿಪನೇನು
ಮರಣದಲಿ ಸಾಕೇನು ಕೀರ್ತಿ ಮಾನ್ಯ.

ಉದ್ಧರಿಸುವಾಸೆ ಕವನಕ್ಕೊ ಕವಿಗಳಿಗೊ
ಇರುವುದೇ? ಹಸಿ ಸುಳ್ಳು ಎಂಬೆ ನಾನು
ಕವಿಯು ಬರೆಯುವ ಹಾಡು ಕನ್ನಡಿಯ ಗಂಟಹುದು
ತೋರಬಹುದಷ್ಟೆ;ಪಡೆಯಲಾರೆ ನೀನು.

ಬಡತನಕೆ ಮರುಗಿದರು ಕ್ರೌರ್ಯಕ್ಕೆ ಉಗುಳಿದರು
ಅಕ್ಷರಕೆ ಉತ್ತರವ ಕೊಡುವನಾರು?
ಇಂತ ಕಾವ್ಯವನೋದಿ ಮೇಜು ಕುಟ್ಟಿದ ಸದ್ದು
ಬರೆದವಗೆ ಸದ್ಗತಿಯು;ಗಾಜು ಚೂರು

ಅನುಭವದ ಮಾತುಗಳ ಬರೆದು ಸೃಷ್ಟಿಸಿದಾತ
ನೆರೆಮನೆಯ ಜನಕೆಲ್ಲ ಕಟ್ಟುಕತೆಯು;
ತನ್ನ ವಿಷಯದ ಹೆಮ್ಮೆ; ನುಡಿಗಟ್ಟಿಗಿಹ ಬಲ್ಮೆ
ಓದುಗನ ತೋಟದಲಿ ಬೆಳೆದ ಕಳೆಯು.

ಕಾವ್ಯ ಜೀವನಪ್ರೀತಿ; ನನ್ನ ನೋಟದ ಕಾಣ್ಕೆ
ನಿಮಗೂ ಪ್ರೀತಿಯೆ ಗುರುತು ಬದುಕಿನಲ್ಲಿ
ನೋವ ಹಂಚುವುದೇನು ಖಾರ ತೆಗಳುವುದೇನು
ಹಾಯಾದ ಸೊಗದುಸಿರು ಕಾವ್ಯದಲ್ಲಿ.

ರಮ್ಯವೂ ಸುಂದರವೂ ಮನಸಹಜದಾಪೇಕ್ಷೆ
ಹಕ್ಕಿನೋಟವು ಇರಲಿ ನನ್ನ ಕಾವ್ಯ
ಸಹಜತೆಯ ಒಪ್ಪುವುದು; ಪ್ರೀತಿಯನು ಹೊದ್ದುವುದು
ಹಿತಕೆ ನಿಜಮಾನಸಕೆ ಇಳಿಯೆ ಧನ್ಯ.

೨. ಗಿರೀಶ್, ಹಂದಲಗೆರೆ
ಒಣಗಿದ ಅಮೇಧ್ಯ
****************

ಅನ್ನಕ್ಕಾಗಿ ಕರುಳು ಮಸೆಯುತ್ತಿರುವಾಗ
ರಸಕಾವ್ಯವ ಹೊಸೆಯಬಹುದೆ
ಓದಿಮರುಳಾಗಬಹುದೆ
ದುಡಿದು ಧಣಿದು ಬೆವರೊರೆಸುವಾಗ
ಹತ್ತೀತೆ ತಲೆಗೆ ಕಲೆ.

ಕುಂಚದಲಿ ಬಣ್ಣಮೆತ್ತಿಸಿಕೊಂಡು
ತೂಗಾಡುವ ಕ್ಯಾನ್ವಾಸುಗಳ ಭಾವ
ಹಸಿದ ಕಣ್ಣುಗಳಿಗೆ ರಸದೌತಣವಾಗುವುದೆ
ಶೃಶ್ರಾವ್ಯ ಸಂಗೀತ ರಾಗತಾಳಗಳ
ಹಸಿದಕಿವಿಗಳು ಆಲಿಸುವುವೆ
ಹೊರಡುವುದೇ ಶೃತಿ.
ಹಸಿದವನ ನಾಭಿಯಿಂದ
ಹಸಿದಾಗ ಕಲಾಸ್ವಾಧ,ಕಾವ್ಯಸೃಷ್ಟಿ
ಒಣಗಿದ ಅಮೇಧ್ಯ
ಕೆಂಡದುಂಡೆಗಳ ನುಂಗಿದನುಭವ ಕರುಳಿಗೆ

ಹೊಟ್ಟೆಪಾಡಿಗಾಗಿ ನೆಚ್ಹಬಹುದೇ ಕಲೆಕಾವ್ಯಗಳ
ನೆಚ್ಹಿದರೆ ಉಳಿಯುವುದೇ ನಮ್ಮತನ
ಅಕ್ಷರ,ಕಲೆಗಳ ನೆಚ್ಹಿದವರಿಗೆ
ಕೂದಲು ನೆರೆದು,ಕೋಲುಹಿಡಿದಮೇಲೆ
ಪ್ರಶಸ್ತಿ,ಪಲಕ,ಸನ್ಮಾನಗಳು,,
ಕೆಲವೊಮ್ಮೆ ಮರಣೋತ್ತರ !
ಬಣ್ಣ ಹಚ್ಹಿ ರಂಗವೇದಿಕೆ ಏರಿದರೆ
ಕೇವಲ ಭರಪೂರ ಚಪ್ಪಾಳೆ !

ಇವು ಹಸಿವಿಂಗಿಸುವುದಿಲ್ಲ
ಹಸಿವು ಎಲ್ಲವನ್ನೂ ಕಲಿಸಬಹುದು
ಹಸಿದವರಿಗೆ ಅನ್ನ
ಧಣಿದವರಿಗೆ ನೀರು
ತಣಿದವರಿಗೆ ಕಲೆ,ಕಾವ್ಯ,,,
ನನ್ನಂತವರಿಗಲ್ಲ:

೩. ಮಂಜುಳಾ, ಬಬಲಾಡಿ 
ನನ್ನ-ಬದುಕ ಸಮಕ್ಷಮ!
******************

ಕಾರಣ ಹುಡುಕುವ ಗೋಜಿದು ಯಾಕೆ?
ಭಾವಗಳ ಹರಿಬಿಡೆ ಸಂದೇಹವು ಬೇಕೆ?
ಬೇಕಿರುವುದು ಬರಿ ಮಾಧ್ಯಮ
ಅಕ್ಷರವಾಗಲಿ
ನನ್ನ-ಬದುಕ ಸಮಕ್ಷಮ!

ಒಳಗಣ್ಣಿಗೂ ಒಂದು ಕನ್ನಡಿ ಬೇಕು
ಕಲ್ಪನೆಗಳರಳಲು 
ಅಕ್ಕರ ಹನಿಗಳು ಬೇಕು
ನೆನಪನು ಹರವಲು 
ಪದಗಳ ಎರವಲು ಬೇಕು
ಎದೆಗುದಿ ಕಳೆಯಲು
ಹಾಳೆಯ ಹಾಸದು ಬೇಕು!

ಸತ್ಯವ ಹಂಚಲು
ಬೆಂಬಲ ಬೇಕು
ಬೆಳಕನು ಚೆಲ್ಲಲು
ಬೆರಗದು ಬೇಕು
ಬೆಸೆಯಲು ಮನಗಳ ಕೊಂಡಿ
ಬೇಕು ಅಕ್ಷರ-ಕಿಂಡಿ!

ಮೌನಕೂ ಉಂಟು ಬಗೆ-ಬಗೆ ಬಣ್ಣ
ಲೋಕದೊಳಗೆ ಸಾವಿರ ಲೋಕಗಳಣ್ಣ
ಬದುಕಿದು, ಬದುಕಿದು
ಪ್ರತಿಫಲನ
ಮಾನಸಗಳ ಸಂಕಲನ
ಅಕ್ಷರಗಳೇ ಇಲ್ಲಿ ರೂವಾರಿ 
ಜಗದ ತಿಳಿವ ಬೆಳೆಸುವ
ರಾಯಭಾರಿ!

೪.  ವಿನಯ್ ಭಾರದ್ವಾಜ್ , ನಂಜನಗೂಡು 

ಎದೆಗೆ ಬಿದ್ದ ಅಕ್ಷರ
**************

ಎದೆಗೆ ಬಿದ್ದ ಅಕ್ಷರವ
ಮಡಿಲಲಿ ಸಾಕುವ ಸಲುವಾಗಿ,
ಮುಡಿಯಲೇ ಬಿರಿದ ಮಲ್ಲಿಗೆಯ,
ಒಡಲಲೇ ಕಾಪಿಡುವ ಸಲುವಾಗಿ,
ಆಯಾಚಿತವಾಗಿ ತಾಗಿದ ಅಲೆಯ
ಮೊರೆತದ ಸಪ್ಪಳವ ಎದೆಯಲೇ
ಕಟ್ಟಿಡುವ ಸಲುವಾಗಿ,
ದಾರಿಹೋಕನ ಮೈಯ್ಯ ಬಿಸುಪಿನ ಬಿಸಿಯ
ಹಸಿಯಾಗಿ ಸಹಿಸುವ ಸಲುವಾಗಿ,
ನಿದ್ರಿಸಿದ ಕಂದಮ್ಮನ ಹಾಲ್ದುಟಿಯ
ತೊದಲಿನ ಕಾವ್ಯ ಕಾಣುವ ಸಲುವಾಗಿ,
ಮೋಹಿತನ ಕಡು ಪ್ರೇಮದ ಉತ್ಕಟತೆಗೆ
ಪ್ರೀತಿ-ವಿರಹದ ಪರಿಭಾಷೆ ಅರಿಯುವ ಸಲುವಾಗಿ,
ಪರಾಭವದ ಮೆಟ್ಟಿಲಲೂ ಎಡವಿ-ತಡವಿ
ದಿಗ್ವಿಜಯಕೆ ಹೊರಡುವ ಸಲುವಾಗಿ,
ಅಂತರಂಗದ ಆಳ ಅಗಲದ ವ್ಯಾಪ್ತಿಯ
ಗಡಿ ಮೀರಿಯೂ ಮೀರದೆ
ಅನ್ವೇಷಣೆಯ ಸಲುವಾಗಿ,
ಎಂದೋ ಭುಗಿಲೆದ್ದ ಸರೋವರವ
ಎದೆಯಲೆ ಬಚ್ಚಿಟ್ಟುಕೊಂಡು,
ಯಾರೋ ಕಂಪಿಸಿದ ಸ್ವರವ
ಹಾಡು ಕಟ್ಟಿ ಹಾಡ ತೊಡಗುತ್ತೇನೆ,
ಮಗದೊಂದು ಅಕ್ಷರ ಎದೆಗೆ
ಬೀಳುವವರೆಗೂ ಬರೆಯ ತೊಡಗುತ್ತೇನೆ....!!

1 ಕಾಮೆಂಟ್‌: