ಮಂಗಳವಾರ, ಏಪ್ರಿಲ್ 2, 2013

ನಾವು ಬರೆಯುವುದಾದರು ಏತಕ್ಕೆ?   ಪ್ರತಿಸ್ಪಂದನೆ ಹೀಗಿವೆ ....


೧. ಪ್ರವರ ಕೊಟ್ಟೂರು 


ಮೈಯ ಬೆವರ ನೈವೇದ್ಯ 
*****************
ಗುಳೆ ಹೊರಟು ನಿಂತ
ಕನಸುಗಳ ತಡೆಯಲಾರದೇ
ಬಿಕ್ಕಿಸಿ ಅತ್ತು
ಮೂಲೆ ಹಿಡಿದಿದ್ದ ಮಾತುಗಳನ್ನು
ಹಿಡಿದು ರಮಿಸಿ ಪದ್ಯವಾಗಿಸಲು
ಬರೆಯುತ್ತೇನೆ.

ಇದೋ ಮರಳುಗಾಡು
ಮರಳಿನೊಳಗೆ ಕಪ್ಪೆ
ಹುದುಗಿ
ಎಂದೋ ಬರುವ ಮಳೆಗೆ
ಅಂಡು ನೋಯುವಂತೆ
ಕಾಯಬೇಕು;
ನಾನೇನು ಕಪ್ಪೆಯಲ್ಲ
ಜೀವ ಹಿಡಿದುಕೊಂಡುಕಾಯಲು;
ಎಲ್ಲೋ ಓಡುವ
ಮೋಡಗಳ ಗುಪ್ಪೆ ಹಾಕಲು
ಬರೆಯುತ್ತೇನೆ.

ಹಿಡಿ ಮಣ್ಣಿಗೆ ಎದೆ ಪೀಠ
ಒಳಗೊಳಗೆ ಹೊಯ್ದಾಟ;
ತೂಕಡಿಸುವ ನೆರಳಿಗೆ
ಮೈಯೊಡ್ಡಿ ನಿದ್ದೆ ಬೇಡಿದವರಲ್ಲ;
ನಿಗಿ ನಿಗಿ ಕೆಂಡದ ನೆಲಕ್ಕೆ ಮೈಯ್ಯ ಬೆವರ
ನೈವೇದ್ಯ,
ಕೂನಿ ಕಹಾನಿಯ ಹೊತ್ತು ನಿಂತ
ಜಾಲಿ ಗಿಡಕೆ ನೂರು ಕಣ್ಣು,
ಸಾವಿರಾರು ಕೋರೆಹಲ್ಲು;
ಒಂದು ಬಿಳಿಯ ಹೂವ ಅರಳಿಸಲು
ಬರೆಯುತ್ತೇನೆ.

ನನ್ನನ್ನೇ ಮುಕ್ಕಿದ
ಮುಖದ ಚಹರೆಗಳ
ಬದಲಿಸುತ್ತೇನೆ;
ಇದೇನು ತೀಟೆಯಲ್ಲ
ತೊಡೆ ತಟ್ಟುವ ಹಠ;
ನಾನು ನಾನಾಗಿಯೇ ಇರಲು
ಬರೆಯುತ್ತೇನೆ.
-ಪ್ರವರ


೨. ಪವನ್ ಪಾರುಪತ್ತೇದಾರ, ಬೆಂಗಳೂರು


   ಉತ್ತರ ಸಿಗದ ಪ್ರಶ್ನೆ 
  **************


ಹೊಳೆದಿಲ್ಲ ಇನ್ನು ನನ್ನ ಪ್ರಶ್ನೆಗಳಿಗುತ್ತರ
ಭಾವನೆಗೆ ಬಣ್ಣೆ ಬಳಿಯೋದೇಕೆಂದು
ಸವೆದ ಚಪ್ಪಲಿಯ ಬಗ್ಗೆ
ಹೇಳಿಕೊಳ್ಳುವುದಾದರೂ ಏನು
ಮುರಿದ ಕನಸುಗಳ ಬಗ್ಗೆ
ಕೊಚ್ಚಿಕೊಳ್ಳುವುದಾದರೂ ಏನು
ಕಸದ ತೊಟ್ಟಿಗೊಂದಷ್ಟು ಸರಕು
ಏಷ್ಟು ಕಸ ಹೆತ್ತರೂ ಮುಗಿಯದಾ ಪ್ರಸವ

ಎತ್ತರದ ಜಗುಲಿಯ ಪೀಠಿಗಳ ನಡುವೆ
ತನ್ನದೇ ಸರಿ ಎನ್ನೊ ವಿತಂಡಿಗಳ ನಡುವೆ
ತೆಪ್ಪನೆ ಮೂಲೆಯಲಿ ಕೂರುವುದ ಬಿಟ್ಟು
ನಂದೊಷ್ಟು ಕಸವನ್ನು ದೂಡುವುದು ಯಾಕೆ
ಕಸದಂತೆ ದೂಡಿದರು ರಸವಾಗಿ ನೋಡಲಿ
ಎಂಬಂತ ತುಚ್ಚತನ ನನ್ನೊಳಗೆ ಯಾಕೆ

ನನ್ನವಳ ಕಿವಿಗೆ ಮಾಟಿ ಬೇಕಂತೆ
ನನ್ನ ಬಳಿ ಅದನವಳು ಹೇಳಿಕೊಂಡಾಗ
ಲೋಕದ ಮುಂದದನ ಒದರುವುದು ಯಾಕೆ
ನನ್ನವಳು ನೋವಿಟ್ಟು ಸಂತಸದಿ ಇರುವಾಗ
ಅವಳನ್ನು ಮರೆತು ನೆಮ್ಮದಿಯಿಂದಿರೊಬದಲು
ಪರರಿಗೂ ಅದನೆಲ್ಲ ಉಣಬಡಿಸೋದ್ಯಾಕೆ
ಲೋಕದ ನೋವುಗಳ ನಾನೂನು ಅನುಭವಿಸಿ
ಲೋಕಕೆ ಮತ್ತದನ ಹರಡುವುದು ಯಾಕೆ
-ಪವನ್ ಪಾರುಪತ್ತೇದಾರ


೩. ವಿನಯ್ ಭಾರದ್ವಾಜ್ , ನಂಜನಗೂಡು


ಕವಿತೆಯ ಪ್ರತಿ ರೂಪಕ
****************

ಅಟ್ ಲೀಸ್ಟ್ ನಿನ್ನೆಡೆಗಿನ ನನ್ನ ಹೋಲಿಕೆ,
ಉತ್ಪ್ರೇಕ್ಷೆ ಅಲ್ಲದಿದ್ದರೂ ರೂಪಕವಾದರೂ ಹೌದು...
ಹಾಗೆಂದು ನನ್ನ ಕವಿತೆಯ ಪ್ರತಿ ರೂಪಕವನ್ನು,
ನೀನು ಉಪೇಕ್ಷಿಸುವಂತಿಲ್ಲ ಕಣೆ...

ಬೈ ಟು ಕಾಫಿಯಾದರೂ ನೀ ಗುಟುಕಿಸಿದ
ಕಪ್ಪಿನ ಕಾಫಿಯ ರುಚಿಯೇ ಸಿಹಿ ಎಂದರೆ,
ನನ್ನ ಕಹಿ ಕಷಾಯ ಕಾಫಿಯನ್ನು,
ನೀನು ಸಂದೇಹಿಸುವಂತಿಲ್ಲ ಕಣೆ....

ನಿನ್ನ ಪ್ರತಿ ಸ್ಪರ್ಶದ ಕಂಪನಕ್ಕೂ ನಾ ಅದುರಿದರೆ,
ಅದು ನಿನ್ನ ತಪ್ಪಲ್ಲ,
ಅಂತೆಯೇ ಆ ಮೋಹಕ ತುಟಿಗೆ ಚುಂಬಿಸಿದಾಗ ಬಣ್ಣ ಚದುರಿದರೆ,
ಅದು ನನ್ನದೂ ತಪ್ಪಲ್ಲ...![ಅದು ಯಾವ ಫ್ಲೇವರ್ರು ಗೊತ್ತಿಲ್ಲ!]

ಈಗೀಗ ಹಾಗಾಗುತ್ತಿದೆ,
ಜಪದ ನೆಪದಲ್ಲಿ ಪ್ರೇಮ ದೇವತೆಯೇ ಪ್ರತ್ಯಕ್ಷಳಾಗುತ್ತಾಳೆ,
ನಾನು ಯಾವ ವರವನ್ನೂ ಬೇಡದ ಮಾತ್ರಕೆ,
ಪ್ರತಿ ಕನವರಿಕೆಗೂ ನೀ ಬಾರದೆ ಹೋಗುವಂತಿಲ್ಲ ಕಣೆ...

ವಿನಯ್ ಭಾರದ್ವಾಜ್

೪. ರಾಜೇಂದ್ರ ಪ್ರಸಾದ್, ಮಂಡ್ಯ 

ತೊಟ್ಟಿಕ್ಕಿದಂತೆ ಎದೆಯ ರಕ್ತ , ನಿನ್ನ ಪದ್ಯ!
***************************

ನೀನು ಜೊತೆಗಿರದ ರಾತ್ರಿಗಳ
ಮಾರಿಕೊಂಡೆ..
ಏಕಾಂತದ ದವಲಾಗ್ನಿಯ
ಉಣಿಸಲು,
ಕವಿತೆಯ ಸಂಗ ಮಾಡಿದೆ.

ನೀನು ಮಾಡಿಟ್ಟ ವೈನೂ
ಬಜಾರಿನಲ್ಲಿ ಸಿಕ್ಕುವ ಸುಡು ಸಿಗರೇಟು
ಹಾಳು ಪಿಚ್ಚರುಗಳು ನನಗೆ ಪಥ್ಯವಲ್ಲ.
ನಿನ್ನ ಬಿಟ್ಟು ಯಾವುದರ ಹಿಂದೆಯೂ
ಒಲವಿಲ್ಲ,... ಹೋಗುವುದಿಲ್ಲ.

ನಿನ್ನ ಕಣಿವೆಯಲಿ ನಾನು ಜಾರುವಾಗ
ಹೇಳಿಕೊಂಡ ಕೇಳ್ವಿಗಳು, ಈಗ ಮಾತನಾಡುತ್ತವೆ
ಬಹಳ. ಕವಿಸಮಯವಂತೀಗ?
ನನಗೇನೋ ತಿಳಿಯದು
ಸುರತ ತಪ್ಪಿದಕ್ಕೆ ಕವಿತೆಯೇ ಸುಖ ಎಂದುಕೊಂಡೆ!

ಅಷ್ಟೇ ಅಲ್ಲ .. ನೀ ಬರುವುದರೊಳಗೆ
ಪೊರೆ ಕಳಚಿಕೊಳ್ಳುತ್ತೇನೆ.
ವಿಷವ ಕಕ್ಕಿಬಿಡುತ್ತೇನೆ. ಈ ಕವಿತೆಗಳಲ್ಲಿ
ನನ್ನ ನಗ್ನ ಸತ್ಯ ,
ಹೇಳಲರಿಯದ ಕೆಟ್ಟ ಕನಸು,
ನಿನ್ನೊಲವು ಉಸಿರುಗಟ್ಟಿವೆ.

ಸಾಕೆನಿಸಿ ನಿರ್ಭಾವಕ್ಕೆ ನನ್ನ ಬಿಗಿದಾಗ
ತೊಟ್ಟಿಕ್ಕಿದಂತೆ ಎದೆಯ ರಕ್ತ
ಹಾಳೆಯ ಮೇಲೆ ಚಿತ್ರವಾಗಿ ..
ಮತ್ತೆರಡು ಕಣ್ಣ ಹನಿಗಳು ಕೂಡಿ
ನಿನ್ನ ಪದ್ಯವಾಗುತ್ತದೆ.
- ರಾಜೇಂದ್ರ ಪ್ರಸಾದ್ 
 


5. ಶರತ್ ಚಕ್ರವರ್ತಿ, ಹಾಸನ.

ಅಸಹಾಯಕ ಕೈಗಳು.
**************
 
ಶಸ್ತ್ರವನ್ನು ಕೈಚೆಲ್ಲಿ ಹೊರಟವನು ಅವನು
ದೇಶ-ಕೋಶ ತ್ಯಜಿಸಿದವನಿಗೆ
ದಾರಿ ನಿರಾಳ ; ರಸ್ತೆ ಸವೆಯುವವರೆಗೆ
ನೆಟ್ಟ ದೃಷ್ಟಿಗಳಾವುವು ಅವನ ಬೆನ್ನಹತ್ತಲಿಲ್ಲ
ನಡೆದೇ ನಡೆದ.
ಅನಂತ ದೃಷ್ಟಿಯಲಿ ಎದುರಿದ್ದುದ ಮರೆತ
ಕೆಂಪು ಕಂಗಳ ಹಸಿರು ನರಗಳು
ಕ್ಷೀಣತೊಡಗಿದವು.

ಅತ್ತ ಅವನ ಕೋಟೆ ಉರುಳಿತ್ತು
ಮತ್ತೊಬ್ಬ ದೊರೆಗಲ್ಲಿ ಭೋಪರಾಕು
ಇವನಿಲ್ಲಿ ನಡೆಯುತ್ತಲೇ ಇದ್ದಾನೆ
ಕಾಲನೊಬ್ಬನೇ ಅವನ ಸಂಗಾತಿ
ನಿತ್ಯ ಅವರಿಗೆ ಅಡಿ ಮೂಡಿಸುವ ಆಟ
ಒಮ್ಮೆ ಅವ ಮುಂದೆ ಮತ್ತೊಮ್ಮೆ ಇವ
ಅಂತೂ ಕಾಲ ಕಯ್ಯೇ ಮೇಲಾಯಿತು.

ಮುಪ್ಪಿನಪ್ಪುಗೆ ಮುತ್ತಿಡುತ್ತಿತ್ತು
ಕುಸಿದು ಬಿದ್ದವನ ಕಣ್ಣಿಗೆ ಕಾಡಿದೇ
ಅವನದೇ ಭೂತ ; ಮರೆವನ್ನರಸಿ
ದಾರಿ ಸವೆಸಿದವನ ಮುಂದೆ ನೆನಪುಗಳ ಜಾತ್ರೆ
ನಾರುತ್ತಿದೆ ಮುಳ್ಳುಚುಚ್ಚಿ ಕೊಳೆತ ಹುಣ್ಣು
ಮುಡಿಯ ತುಂಬಾ ಜಡೆಯ ಜಡ್ಡು
ಕಾಲನಿಗೆ ಸಡ್ಡು ಹೊಡೆದ ಕ್ರೂರ ಕಣ್ಗಳು
ನಿರ್ವೀರ್ಯ ಪರಿತ್ಯಾಗಿಯ ಕಂಡು ಗೊರವಗಳು ನಕ್ಕಿವೆ
ಬಿದ್ದವನ ಹೊತ್ತು ನಡೆಯಲು ಕಾಲನೇನೋ ಕಾತರ
ಅನ್ವೇಷಕನ ಕಣ್ಗಳ ಕಲ್ಪಿಸುತ್ತಾ ಕುಳಿತ
ಕವಿ ಬೆವರುತ್ತಾನೆ.
ಅಸಹಾಯಕ ಕೈಗಳು ಬರೆಯತೊಡುಗುತ್ತವೆ.

-ಶರತ್ ಚಕ್ರವರ್ತಿ.
 

11 ಕಾಮೆಂಟ್‌ಗಳು:

  1. ಎಲ್ಲಾ ಕವನಗಳೂ ಸೂಪರ್..

    RP ಸುರತ ತಪ್ಪಿದಕ್ಕೆ ಕವಿತೆಯೇ ಸುಖ ಎಂದುಕೊಂಡೆ! :)

    ಎಲ್ಲರ ಕವನಗಳೂ ಚೆನ್ನಾಗಿದೆ. ಕಾವ್ಯಕಾರಣಕ್ಕಿಂತ ಕಾವ್ಯನಿರೂಪಣ ಎನ್ನಬಹುದು. ನಾನು ಬರೆಯುವುದಾದರೂ ಏತಕ್ಕೆ ಎನ್ನುವ ಅಭಿಪ್ರಾಯಕ್ಕೆ ಸರಿಯಾದ ನಿಲುವು ಪ್ರವರ ಬಿಟ್ರೆ ಉಳಿದವರದ್ದು ಸ್ವಲ್ಪ ಸ್ವಂತಕ್ಕೆ ಆಗಿದೆ. :) ಚೆನ್ನಾಗಿದೆ ..

    ಪ್ರತ್ಯುತ್ತರಅಳಿಸಿ
  2. ಪ್ರವರ,ಪವನ್,ವಿನಯ್,ರಾಜೇಂದ್ರ,ಶರತ್
    ಬೆರಗಾಗಿದ್ದೇನೆ!! ಹೊಸದಾಗಿ ಬರೆಯುವವರೂ ಕವಿತೆಗಳಿಂದ ದೂರ ಓಡುತ್ತಾರೆ. ಕವಿತೆಯಲ್ಲಿ ಗದ್ಯಕ್ಕೆ ದೊರಕುವ ’ಪ್ರಾಫಿಟಬಿಲಿಟಿ’ ಕಾಣುವುದಿಲ್ಲ ಎಂದು ನೇರವಾಗೇ ಹೇಳುವುದನ್ನು ಕೇಳಿದ್ದೇನೆ. ಬಹಳಷ್ಟು ಜನ ’ಕವಿತೆಗಳೆಂದರೆ ಅರ್ಥವಾಗುವದೇ ಇಲ್ಲ!’ ಅಂದುಬಿಟ್ಟು ಪ್ರತಿಕ್ರಿಯಿಸುವುದರಿಂದ ನುಣುಚಿಕೊಂಡುಬಿಡುತ್ತಾರೆ. ಕೀರಮ್ ಒಮ್ಮೆ ಹೇಳಿದ್ದರು ’ಕವಿತೆ ಏನಪ್ಪಾ ಅಂದರೆ ನಿಮಗೆ ಅದನ್ನ ಓದಿದಾಗ ಅಥವ ಕೇಳಿದಾಗ ಏನು ದಕ್ಕುತ್ತೊ ಅದು!! ಹಾಗೆ ದಕ್ಕಬೇಕು ಅಂತಲೂ ಏನಿಲ್ಲ.’ ಅಂತ. ನಿಮ್ಮ ಕವಿತೆಗಳಿಂದ ಬಹಳಷ್ಟು ಸಿಕ್ಕಿತು ಎಂದು ಸಂತಸದಿಂದ ಹೇಳಬಲ್ಲೆ!! ಮುಂದುವರೆಸಿ...ಓದುತ್ತಿರುತ್ತೇನೆ.

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ಟೀನಾಅವರೇ ತುಂಬಾ ಸಂತಸವಾಯಿತು ನಿಮ್ಮ ಪ್ರತಿಕ್ರಿಯೆಗೆ ನಾವು ಉಪಕೃತರು. ನಿಮ್ಮ ಬೆಂಬಲವಿರಲಿ ಸದಾ :)

      ಅಳಿಸಿ
  3. ಎಲ್ಲಾ ಕವನಗಳೂ ಚೆನ್ನಾಗಿವೆ. ಒಂದು ಉತ್ತಮ ಸದಾಶಯ ಹೊತ್ತು ತನ್ನನ್ನು ನವೀನವಾಗಿ ತೆರೆದುಕೊಳ್ಳುತ್ತಿರುವ ’ಕಾವ್ಯಕಾರಣ’ ಬ್ಲಾಗ್ ಗೆ ಅಭಿನಂದನೆಗಳು. ಈ ಮೂಲಕ ಒಳ್ಳೊಳ್ಳೆಯ ಓದುಗಳು ಓದುಗರಿಗೆ ದೊರೆಯುವಂತಾಗಲಿ ಎಂದು ಹಾರೈಸುತ್ತೇನೆ.

    - ಪ್ರಸಾದ್.ಡಿ.ವಿ.

    ಪ್ರತ್ಯುತ್ತರಅಳಿಸಿ
  4. ಮುಂದುವರೆದು, ಶರತ್ ಅವರ ಶರತ್ತಿನ ಕವನವನ್ನೂ ಸೇರಿಸಿಕೊಂಡು,
    ಬರೆಯುವ ಮುಖೇನ ಕವಿ/ಬರಹಗಾರ ತನ್ನತನವನ್ನು ಸಮಾಜಕ್ಕೆ ತೋರಿಸಿಕೊಳ್ಳುವ ಕ್ರಿಯೆಯನ್ನು ನಾಲ್ಕು ಕವನಗಳು ಪ್ರತಿನಿಧಿಸುತ್ತದೆ. ವಿನಯ್ ಅವರ ಕವನ ಸ್ವಲ್ಪ ಬೇರೆಯದು ಅನ್ನಿಸುವಂತಹದ್ದು.
    ತಾನು ಸಮಾಜಮುಖಿಯಾಗಿರಲೇ ಬೇಕು ಎನ್ನುವ ದೊಡ್ಡ ಆಶಯವೊಂದು ಕವಿಗೆ ಇದೆ ಎನ್ನುವುದಕ್ಕೆ ನಾಲ್ಕು ಕವನಗಳು ಸಾಕ್ಷಿಯೇ?
    ನನ್ನ ಪ್ರಶ್ನೆಗಳು ಸ್ವಲ್ಪ ಬಾಲಿಶ ಮತ್ತು ಅಪೇಕ್ಷಣೀಯ.
    ೧. ಕವನ ಸಮಾಜಮುಖಿಯಾಗಿರಲೇ ಬೇಕೆಂಬ ನಿಯಮವೇಕೆ ಬರಹಗಾರರಲ್ಲಿ?
    ೨. ಕವನ ಒಂದು ವರ್ತುಲದಲ್ಲೇ ತಿರುಗುವುದಕ್ಕೆ ನನ್ನ ಆಕ್ಷೇಪವಿದೆ. ಅದನ್ನು ಆದಷ್ಟು ಹೆಚ್ಚು ಜನ ಗ್ರಹಿಸುವಂತೆ ಅರ್ಥೈಸುವಂತೆ ಮಾಡುವ ಬಗೆ ಹೇಗೆ?

    ಪ್ರತ್ಯುತ್ತರಅಳಿಸಿ
  5. ಈಶ್ವರ ಭಟ್ : ನಮಗೆ ತಿಳಿದ ಮಟ್ಟಿಗೆ ಉತ್ತರಗಳು:-
    1. ಕಾವ್ಯಕ್ಕೆ ಯಾವ ಪೂರ್ವಾಗ್ರಹವೂ , ಉತ್ತರಾಲೋಚನೆಯು ಇಲ್ಲ.. ಬರಹಗಾರನ ಪ್ರಜ್ಞೆಯ ಮೇಲೆ ಇದು ಅವಲಂಬಿತ. ಇಡೀ ಸಮಾಜವನ್ನು ಕವಿಯು ಪ್ರತಿನಿಧಿಸುತ್ತಾನೆ.. ಹಾಗಿದ್ದ ಮೇಲೆ ಅವನ ಬರಹ ಸಮಾಜಮುಖಿಯಾಗಬೇಕಲ್ಲವೇ ?? ನೆಟ್ಟ ಅರಳಿ ಗಿಡ ನನ್ನೊಬ್ಬನಿಗೆ ಉಸಿರನೀಡಬೇಕೆನ್ನುವುದು ಹೇಗೆ? ಕಾವ್ಯ ನಿಯಾಮಾತೀತ... ಗಮನಿಸಿ 'ಸಮಾಜಮುಖಿ' ಅನ್ನೋದು ಪ್ರಜ್ಞೆ ನಿಯಮ ಅಲ್ಲ.
    2.ಕಾವ್ಯ ಯಾವ ವರ್ತುಲಕ್ಕೂ ಸಿಕ್ಕುವುದಿಲ್ಲ... ಅದು ವಿಶ್ವಾತ್ಮಕ. ಆದರೆ ಎಲ್ಲರು ಗ್ರಹಿಸುವಂತೆ ಅರ್ಥೈಸುವಂತೆ ಮಾಡುವ ಬಗೆ ಹೇಗೆ ಮಾತ್ರ ನಿಗೂಢ! ನಮ್ಮ ಪ್ರಯತ್ನಗಳು ಕೂಡ ಇದೆ ಕಾಳಜಿಯದ್ದು.

    ಪ್ರತ್ಯುತ್ತರಅಳಿಸಿ
  6. ಉತ್ತಮವಾದ ಕನ್ನಡ ಕವನಗಳೆ ದೊರಕುತಿಲ್ಲ ಎಂದು ಅನ್ನುವ ವೇಳೆಯಲ್ಲಿ, ಅತ್ಯುತ್ತಮ ಕವನಗಳನ್ನ ನೀಡುತ್ತಿರುವ ತಮಗೆ ಧನ್ಯವಾದಗಳು.... ಒಳ್ಳೆಯ ಕವಿತೆಗಳು ಬರುತ್ತಿರಲೆಂದು ಪ್ರಾರ್ಥಿಸುತ್ತೇನೆ.... ಶುಭವಾಗಲಿ....

    ಪ್ರತ್ಯುತ್ತರಅಳಿಸಿ
  7. ಪ್ರವರ ಕೊಟ್ಟೂರರ ಮೈಯ ಬೆವರ ನೈವೇದ್ಯದಲ್ಲಿ ಕೊಟ್ಟಿರುವ ಕಾವ್ಯಕಾರಣ ಪ್ರವರದಲ್ಲಿಯ ದಟ್ಟರೂಪಕಗಳೂ, ಮೋಡಗಳನ್ನು 'ಬಿಕ್ಕಿಸುವ' ವಿಶಿಷ್ಟ ಭಾಷೆಯೂ ಪ್ರಸ್ತುತ ಸಂಧರ್ಭದಲ್ಲಿ ವಿಭಿನ್ನವಾಗಿ ಎದ್ದು ಕಾಣುತ್ತವೆ. ಮೆಚ್ಚಿದೆ :)

    ಪ್ರತ್ಯುತ್ತರಅಳಿಸಿ