ಗಿರೀಶ್ ಹಂದಲಗೆರೆ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಗಿರೀಶ್ ಹಂದಲಗೆರೆ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಸೋಮವಾರ, ಏಪ್ರಿಲ್ 8, 2013

ನಾವು ಬರೆಯುವುದಾದರು ಏತಕ್ಕೆ? - II

 

1. ಈಶ್ವರ ಭಟ್ . 

ಕಾವ್ಯ ಜೀವನಪ್ರೀತಿ

****************
 ನನಗೆ ನೋವಿನ ಎಳೆಯು ಮಂಜಾಗಿ ಕಾಣುವುದು
ನಲಿವೇನೋ ಹೊಮ್ಮುವುದು ಬೆಳಕಿನಂತೆ
ನಾನು ಬರೆಯುವ ಹಾಡಿಗಿನ್ನೆಷ್ಟು ತುಂಬುವುದು?
ಬದುಕು ನೋವ್ ನಲಿವುಗಳ ದೊಡ್ಡ ಸಂತೆ

ಕವನ ಜನಿಸುವ ಸಮಯ ನಿಶ್ವಿಂತನಾಗುವೆನು
ಕವನ ಕೇಳುವ ನೆಪದಿ ಮಾತು ಮರೆವೆ
ಕಚ್ಚುವುದು ಬೆಚ್ಚುವುದು ನುಡಿಯ ಆವೇಶಕ್ಕೆ
ಕವಿಗೇನ್ ಮಣಿಯುವುದು; ನುಡಿಗೆ ಮಣಿವೆ

ಪೂರ್ವಸೂರಿಗಳೆಲ್ಲ ರಮ್ಯದಲಿ ನವ್ಯದಲಿ 
ಹೇಳಿದ್ದು ಬಹಳಷ್ಟು ಗಳಿಕೆ ಶೂನ್ಯ!
ನೋಟುಗಳ ಕಟ್ಟಿನಲಿ ಮನುಜ ನಿದ್ರಿಪನೇನು
ಮರಣದಲಿ ಸಾಕೇನು ಕೀರ್ತಿ ಮಾನ್ಯ.

ಉದ್ಧರಿಸುವಾಸೆ ಕವನಕ್ಕೊ ಕವಿಗಳಿಗೊ
ಇರುವುದೇ? ಹಸಿ ಸುಳ್ಳು ಎಂಬೆ ನಾನು
ಕವಿಯು ಬರೆಯುವ ಹಾಡು ಕನ್ನಡಿಯ ಗಂಟಹುದು
ತೋರಬಹುದಷ್ಟೆ;ಪಡೆಯಲಾರೆ ನೀನು.

ಬಡತನಕೆ ಮರುಗಿದರು ಕ್ರೌರ್ಯಕ್ಕೆ ಉಗುಳಿದರು
ಅಕ್ಷರಕೆ ಉತ್ತರವ ಕೊಡುವನಾರು?
ಇಂತ ಕಾವ್ಯವನೋದಿ ಮೇಜು ಕುಟ್ಟಿದ ಸದ್ದು
ಬರೆದವಗೆ ಸದ್ಗತಿಯು;ಗಾಜು ಚೂರು

ಅನುಭವದ ಮಾತುಗಳ ಬರೆದು ಸೃಷ್ಟಿಸಿದಾತ
ನೆರೆಮನೆಯ ಜನಕೆಲ್ಲ ಕಟ್ಟುಕತೆಯು;
ತನ್ನ ವಿಷಯದ ಹೆಮ್ಮೆ; ನುಡಿಗಟ್ಟಿಗಿಹ ಬಲ್ಮೆ
ಓದುಗನ ತೋಟದಲಿ ಬೆಳೆದ ಕಳೆಯು.

ಕಾವ್ಯ ಜೀವನಪ್ರೀತಿ; ನನ್ನ ನೋಟದ ಕಾಣ್ಕೆ
ನಿಮಗೂ ಪ್ರೀತಿಯೆ ಗುರುತು ಬದುಕಿನಲ್ಲಿ
ನೋವ ಹಂಚುವುದೇನು ಖಾರ ತೆಗಳುವುದೇನು
ಹಾಯಾದ ಸೊಗದುಸಿರು ಕಾವ್ಯದಲ್ಲಿ.

ರಮ್ಯವೂ ಸುಂದರವೂ ಮನಸಹಜದಾಪೇಕ್ಷೆ
ಹಕ್ಕಿನೋಟವು ಇರಲಿ ನನ್ನ ಕಾವ್ಯ
ಸಹಜತೆಯ ಒಪ್ಪುವುದು; ಪ್ರೀತಿಯನು ಹೊದ್ದುವುದು
ಹಿತಕೆ ನಿಜಮಾನಸಕೆ ಇಳಿಯೆ ಧನ್ಯ.

೨. ಗಿರೀಶ್, ಹಂದಲಗೆರೆ
ಒಣಗಿದ ಅಮೇಧ್ಯ
****************

ಅನ್ನಕ್ಕಾಗಿ ಕರುಳು ಮಸೆಯುತ್ತಿರುವಾಗ
ರಸಕಾವ್ಯವ ಹೊಸೆಯಬಹುದೆ
ಓದಿಮರುಳಾಗಬಹುದೆ
ದುಡಿದು ಧಣಿದು ಬೆವರೊರೆಸುವಾಗ
ಹತ್ತೀತೆ ತಲೆಗೆ ಕಲೆ.

ಕುಂಚದಲಿ ಬಣ್ಣಮೆತ್ತಿಸಿಕೊಂಡು
ತೂಗಾಡುವ ಕ್ಯಾನ್ವಾಸುಗಳ ಭಾವ
ಹಸಿದ ಕಣ್ಣುಗಳಿಗೆ ರಸದೌತಣವಾಗುವುದೆ
ಶೃಶ್ರಾವ್ಯ ಸಂಗೀತ ರಾಗತಾಳಗಳ
ಹಸಿದಕಿವಿಗಳು ಆಲಿಸುವುವೆ
ಹೊರಡುವುದೇ ಶೃತಿ.
ಹಸಿದವನ ನಾಭಿಯಿಂದ
ಹಸಿದಾಗ ಕಲಾಸ್ವಾಧ,ಕಾವ್ಯಸೃಷ್ಟಿ
ಒಣಗಿದ ಅಮೇಧ್ಯ
ಕೆಂಡದುಂಡೆಗಳ ನುಂಗಿದನುಭವ ಕರುಳಿಗೆ

ಹೊಟ್ಟೆಪಾಡಿಗಾಗಿ ನೆಚ್ಹಬಹುದೇ ಕಲೆಕಾವ್ಯಗಳ
ನೆಚ್ಹಿದರೆ ಉಳಿಯುವುದೇ ನಮ್ಮತನ
ಅಕ್ಷರ,ಕಲೆಗಳ ನೆಚ್ಹಿದವರಿಗೆ
ಕೂದಲು ನೆರೆದು,ಕೋಲುಹಿಡಿದಮೇಲೆ
ಪ್ರಶಸ್ತಿ,ಪಲಕ,ಸನ್ಮಾನಗಳು,,
ಕೆಲವೊಮ್ಮೆ ಮರಣೋತ್ತರ !
ಬಣ್ಣ ಹಚ್ಹಿ ರಂಗವೇದಿಕೆ ಏರಿದರೆ
ಕೇವಲ ಭರಪೂರ ಚಪ್ಪಾಳೆ !

ಇವು ಹಸಿವಿಂಗಿಸುವುದಿಲ್ಲ
ಹಸಿವು ಎಲ್ಲವನ್ನೂ ಕಲಿಸಬಹುದು
ಹಸಿದವರಿಗೆ ಅನ್ನ
ಧಣಿದವರಿಗೆ ನೀರು
ತಣಿದವರಿಗೆ ಕಲೆ,ಕಾವ್ಯ,,,
ನನ್ನಂತವರಿಗಲ್ಲ:

೩. ಮಂಜುಳಾ, ಬಬಲಾಡಿ 
ನನ್ನ-ಬದುಕ ಸಮಕ್ಷಮ!
******************

ಕಾರಣ ಹುಡುಕುವ ಗೋಜಿದು ಯಾಕೆ?
ಭಾವಗಳ ಹರಿಬಿಡೆ ಸಂದೇಹವು ಬೇಕೆ?
ಬೇಕಿರುವುದು ಬರಿ ಮಾಧ್ಯಮ
ಅಕ್ಷರವಾಗಲಿ
ನನ್ನ-ಬದುಕ ಸಮಕ್ಷಮ!

ಒಳಗಣ್ಣಿಗೂ ಒಂದು ಕನ್ನಡಿ ಬೇಕು
ಕಲ್ಪನೆಗಳರಳಲು 
ಅಕ್ಕರ ಹನಿಗಳು ಬೇಕು
ನೆನಪನು ಹರವಲು 
ಪದಗಳ ಎರವಲು ಬೇಕು
ಎದೆಗುದಿ ಕಳೆಯಲು
ಹಾಳೆಯ ಹಾಸದು ಬೇಕು!

ಸತ್ಯವ ಹಂಚಲು
ಬೆಂಬಲ ಬೇಕು
ಬೆಳಕನು ಚೆಲ್ಲಲು
ಬೆರಗದು ಬೇಕು
ಬೆಸೆಯಲು ಮನಗಳ ಕೊಂಡಿ
ಬೇಕು ಅಕ್ಷರ-ಕಿಂಡಿ!

ಮೌನಕೂ ಉಂಟು ಬಗೆ-ಬಗೆ ಬಣ್ಣ
ಲೋಕದೊಳಗೆ ಸಾವಿರ ಲೋಕಗಳಣ್ಣ
ಬದುಕಿದು, ಬದುಕಿದು
ಪ್ರತಿಫಲನ
ಮಾನಸಗಳ ಸಂಕಲನ
ಅಕ್ಷರಗಳೇ ಇಲ್ಲಿ ರೂವಾರಿ 
ಜಗದ ತಿಳಿವ ಬೆಳೆಸುವ
ರಾಯಭಾರಿ!

೪.  ವಿನಯ್ ಭಾರದ್ವಾಜ್ , ನಂಜನಗೂಡು 

ಎದೆಗೆ ಬಿದ್ದ ಅಕ್ಷರ
**************

ಎದೆಗೆ ಬಿದ್ದ ಅಕ್ಷರವ
ಮಡಿಲಲಿ ಸಾಕುವ ಸಲುವಾಗಿ,
ಮುಡಿಯಲೇ ಬಿರಿದ ಮಲ್ಲಿಗೆಯ,
ಒಡಲಲೇ ಕಾಪಿಡುವ ಸಲುವಾಗಿ,
ಆಯಾಚಿತವಾಗಿ ತಾಗಿದ ಅಲೆಯ
ಮೊರೆತದ ಸಪ್ಪಳವ ಎದೆಯಲೇ
ಕಟ್ಟಿಡುವ ಸಲುವಾಗಿ,
ದಾರಿಹೋಕನ ಮೈಯ್ಯ ಬಿಸುಪಿನ ಬಿಸಿಯ
ಹಸಿಯಾಗಿ ಸಹಿಸುವ ಸಲುವಾಗಿ,
ನಿದ್ರಿಸಿದ ಕಂದಮ್ಮನ ಹಾಲ್ದುಟಿಯ
ತೊದಲಿನ ಕಾವ್ಯ ಕಾಣುವ ಸಲುವಾಗಿ,
ಮೋಹಿತನ ಕಡು ಪ್ರೇಮದ ಉತ್ಕಟತೆಗೆ
ಪ್ರೀತಿ-ವಿರಹದ ಪರಿಭಾಷೆ ಅರಿಯುವ ಸಲುವಾಗಿ,
ಪರಾಭವದ ಮೆಟ್ಟಿಲಲೂ ಎಡವಿ-ತಡವಿ
ದಿಗ್ವಿಜಯಕೆ ಹೊರಡುವ ಸಲುವಾಗಿ,
ಅಂತರಂಗದ ಆಳ ಅಗಲದ ವ್ಯಾಪ್ತಿಯ
ಗಡಿ ಮೀರಿಯೂ ಮೀರದೆ
ಅನ್ವೇಷಣೆಯ ಸಲುವಾಗಿ,
ಎಂದೋ ಭುಗಿಲೆದ್ದ ಸರೋವರವ
ಎದೆಯಲೆ ಬಚ್ಚಿಟ್ಟುಕೊಂಡು,
ಯಾರೋ ಕಂಪಿಸಿದ ಸ್ವರವ
ಹಾಡು ಕಟ್ಟಿ ಹಾಡ ತೊಡಗುತ್ತೇನೆ,
ಮಗದೊಂದು ಅಕ್ಷರ ಎದೆಗೆ
ಬೀಳುವವರೆಗೂ ಬರೆಯ ತೊಡಗುತ್ತೇನೆ....!!

ಭಾನುವಾರ, ಏಪ್ರಿಲ್ 7, 2013

ಗದ್ಯ ಕಾವ್ಯ ಪ್ರಯೋಗದ ಮೊದಲ ಪೈರುಗಳಿವು ...


1. ಗಿರೀಶ್, ಹಂದಲಗೆರೆ.

ಸ್ಖಲನ 
ಈ ಹಾಳುಪ್ರಾಯವೇ ಹೀಗೆ
ಅನ್ನನೀರಿಗಿಂತ ಕಾಮಪ್ರೇಮವನ್ನೇ ಧ್ಯಾನಿಸುತ್ತದೆ
ಕಂಡ ಹೆಣ್ಣುಗಳ ಎದೆಮೇಲೇ ಕಣ್ಣು
ಗಾತ್ರಗಳ ಅಳೆದು ಚಪ್ಪರಿಸುತ್ತದೆ ಮನ
ಯಾವುದೋ ಹೆಣ್ಣಿನ ದ್ವನಿ,ನಗೆ,ಬಳುಕುವ ನಡಿಗೆ
ಜೀಕುವ ಮುಂಗುರುಳು,ಗಲ್ಲ,ಹುಬ್ಬು,ತಗ್ಗು,,,
ರಾತ್ರಿಯ ನಿದ್ದೆಯಒದ್ದು ಚಡ್ಡಿಯ ಹೊದ್ದೆಯಾಗಿಸುತ್ತವೆ
ಸೂಳೆಯರ ಎಡತಾಕಿ ಪುರುಷತ್ವವ ಪರೀಕ್ಷಿಸಿಕೊಳ್ಳುವ ತವಕ
ಸರಿ ರಾತ್ರಿಯಲ್ಲಿ ಕಾಮಕರಗುವಾಗ ಕಿಟಕಿ ಬಾಗಿಲಿಗಳ ಇಣುಕಿಸುತ್ತದೆ
ಕದ್ದುಮುಚ್ಹಿನೋಡಿ ಸವಿದಷ್ಟೂ ನಿಗೂಡವಾಗುವ ಹೆಣ್ಣ
ಬೆತ್ತಲೆಗೊಳಿಸಿ ಸುಖವ ಸೂರೆಮಾಡುವ ಉತ್ಕಟ ಬಯಕೆ
ನಾಯಿ,ಕುರಿ,ಕೋಳಿ,ಹೋರಿಗಳ ಬೇಟಕ್ಕೆ ಕಣ್ಣ್ ಅರಳುತ್ತವೆ
ನಮಗೇಕಿಲ್ಲ ಮುಕ್ತತೆ ?ಎಂದು ಸಮಾಜವನ್ನ ಶಪಿಸುತ್ತದೆ
ಅಫೀಮಿನ ಅಮಲು ಏರುವ ಜವ್ವನೆ
ಪಕ್ಕದಮನೆಯ ಗೃಹಿಣಿ,ಪಾಠ ಹೇಳುವ ಮೇಡಂ,
ಅಕ್ಕರೆಯ ಅಕ್ಕ,ತಂಗಿ,ತಾಯಿಯರ ಎದೆಗಳತಡವಿ,
ಸ್ಕಲಿಸುತ್ತದೆ ಕನಸಿನಲ್ಲಿ!
ಛೇ ಬೇಡವೆ ಕಾಮಕ್ಕೆ ಕಣ್ಣು
ತಪ್ಪು ಪ್ರಾಯದ್ದೋ, ಪ್ರಕೃತಿಯದ್ದೋ?
ಇಟ್ಟ ಹೆಸರು ಈಡಿಪಸ್ ಕಾಂಪ್ಲೆಕ್ಸ್.


2 . ವಿನಯ್ ಭಾರದ್ವಾಜ್ , ನಂಜನಗೂಡು 

ಒಮ್ಮೆ ದಿವಂಗತನಾಗಬೇಕು!


ಬದುಕಿನ ಇಷ್ಟಗಲದ ಅಂಗಳದಲಿ ಹೆಕ್ಕಿದ ಹೂಗಳು, ಅವೆಷ್ಟೋ ಲೆಕ್ಕವಿಲ್ಲ. ಅದರ ಗಂಧ ಮಾತ್ರ ಕನಸಿನಲ್ಲೂ ಸ್ಪಷ್ಟ. ಹೂ ಕಟ್ಟಿದ ಬೆರಳು ಆಯಾಚಿತವಾಗಿ ಗಂಧ ಉಳಿಸಿಕೊಂಡರೆ, ತಾನಾಗಿ ಬಿಡಬಹುದೇನು ಭ್ರಷ್ಟ?! ಸಂಬಂಧಗಳ ತೂಗು ತಕ್ಕಡಿಯ ತೂಗಿದ ಕೈಗಳು ಎಣಿಸಿದರೆ ತಪ್ಪಾದೀತು, ಯಾವುದು ಲಾಭ, ಯಾವುದು ನಷ್ಟ? ನನ್ನದೇ ಪಪ್ರೆಶ್ನೆಗಳಿಗೆ ಅಗ್ನಿಗಾಹುತಿ...ಬದುಕೇನು ತನ್ನ ಪಾವಿತ್ರತೆಯ ಪ್ರೆಶ್ನೆಯೇ ಅಥವಾ ಪಾತಿವ್ರತೆಯ....? ಅಥವಾ ಬದುಕಿನ ತೀವ್ರತೆಯ! ಇಂತಹ ಉತ್ಕಟತೆಯಲಿ ತನ್ನ ಸುತ್ತ ತಾನೇ ಗೀರೆಳೆದುಕೊಂಡು, ಗೆರೆ ಮೀರಿ ಗಡಿಪಾರಾಗಿ ಬಿಡುವುದು.... ಅಲ್ಲಿ ಗುಡಿಗಳಿಲ್ಲ, ಸ್ಥಂಭಗಳಿಲ್ಲ, ಲಾಂಛನಗಳ ಸೋಗಿಲ್ಲ. ಅಲ್ಲೊಂದು ಅಸ್ತಿತ್ವವ ಕಂಡುಕೊಂಡ ಮೇಲೆ, ಅದನೂ ಮೀರುವ ಹಪಹಪಿ. ಒಳಗಿರುವ ಜ್ವಾಲೆ ಸದಾ ಉದ್ವಿಗ್ನ.
ಈಗ ತನ್ನ ಮಾನವತೆಯ ಪ್ರೆಶ್ನೆ. ತಾನೇನು ದೈವಾಂಶನೋ, ಅಥವ ರಕ್ಕಸನೋ? ಸಜಾತಿಯೂ ಅಲ್ಲದ ವಿಜಾತಿಯೂ ಅಲ್ಲದ ಹಾಗೆ... ಮೂಲದಲ್ಲಿ ತನ್ನ ಮಾನವತೆಯೇ ಕಳೆದಿದೆಯಲ್ಲ. ಹುಡುಕುವ ಹಾದಿಯಲ್ಲಿ ಪುನಃ ರೂಪಾಂತರಗೊಂಡು ಮತ್ತೇನೋ ಆಗಿ ಬಿಡಬೇಕೆಂಬ ತುಡಿತ! ರೂಪಾಂತರವೂ, ನಿದ್ರೆ, ಆಹಾರ, ಮಿಥುನದಷ್ಟೇ ಸಹಜವೇ...! ಇಂತಹ ಸ್ಥಿತ್ಯಂತರಗಳ ಮೀರಲೋಸುಗವಾದರೂ ದಿವಂಗತನಾಗಬೇಕು..ಒಮ್ಮೆ ದಿವಂಗತನಾಗಬೇಕು!"


3. ಪ್ರವರ, ಕೊಟ್ಟೂರು. 

ಜೀಕುವ ಮುಂಗುರುಳು

ಮುಂಗುರಳನ್ನು ಅದೆಷ್ಟು ಹೊತ್ತಿನಿಂದ ತಿರುವುತ್ತಲೇ ಇದ್ದೀಯಲ್ಲ,
ಕೆನ್ನೆ ಸವರಿ ಛೇಡಿಸುತಿದ್ದ ಅದನ್ನು ಹಾಗೇ ಇರಲು ಬಿಡು, ನಾನು ಮುಟ್ಟದ ಹೊರತು ಕೆಂಪೇರಬಾರದು;
ಬಳ್ಳಿಯುಂಗುರ ಹೀಗೆ ನಿನ್ನ ಮುಂಗುರುಳಂತೆ ಬಳುಕುತ್ತದೆ, ಬಳಸಿ ನಿಂತರೆ ನಾಚಿಕೆಗೆ ಮೇಲೆ ಪುಟಿಯುತ್ತದೆ
ಮಳೆ, ಧೂಳು, ಸಣ್ಣಗಿನ ಸುಳಿಗಾಳಿ ಎಲ್ಲವೂ ಅದರೊಳಗೆ ಗಾಢವಾಗಿ ಧಾನಿಸುತ್ತಾ ಕೂರುತ್ತವೆ
ಜಾರುವಾಟವಾಡುತ್ತವೆ ಜಾರು ಸೊಂಟದ ಮೇಲೆ ಬೆರಳಾಡಿಸಿದಂತೆ.
ಎದೆಯುಬ್ಬಿಸಿ ಜೋರಾಗಿ ಉಸುರುವಾಗ ಚಂಗನೆ ಹಾರಿ ಜೀಕುತ್ತದೆ ಒಮ್ಮೆ ಹಿಂದಕ್ಕೂ, ಇನ್ನೊಮ್ಮೆ ಮುಂದಕ್ಕೂ ಜೋಕಾಲಿ;
ನಿನ್ನ ಅರ್ಧ ಕಣ್ಣನ್ನು ಮುಚ್ಚಿ ತೂಗಿ ತೊನೆಯುವ ಆ ಮುಂಗುರುಳದೇ ಜಾದೂ
ಅದೆಷ್ಟು ಕಣ್ಣುಗಳು ನಿನ್ನ ಮೇಲೆ ಸುಳಿದಾಡುತ್ತಿವೆ, ಮೊದಲು ಲಟಿಕೆ ಮುರಿದು ದೃಷ್ಠಿ ತೆಗಿಸಬೇಕು;
ಹಾಗೆ ನೇವರಿಸದೇ ಬಿಡು ಹುಡುಗಿ ನಿನ್ನ ಮತ್ತೆ ಮತ್ತೆ ನೋಡಬೇಕು.


4.  ಪವನ್ ಪಾರುಪತ್ತೇದಾರ. ಬೆಂಗಳೂರು 
   
ಒಂದು  ಸ್ವಗತ 

ನಂದು ಕೂಡ ಮನಸೇ ಅಲ್ಲವೇ
ಅಂದು ನಿನ್ನಕ್ಕ ಎಂದು ಗೊತ್ತಿಲ್ಲದೇ ಸೂಪರ್ ಫಿಗರ್ ಎಂದಿದ್ದೆ
ಅದಕ್ಕೆ ಲಾಲ್ ಭಾಗಿನ ಬಿದಿರ ಪೊದೆಯಲ್ಲಿ ಎಷ್ಟು ಗಿಲ್ಲಿದ್ದೆ
ಕೈಮೇಲೆ ಇಂದಿಗೂ ಅದೇ ಗಾಯದ ಗುರುತು
ಮೊನ್ನೆ ಹೆಣ್ಣಿನ ಕಡೆಯವರು ಕೇಳ್ದಾಗ ಎಣ್ಣೆ ಹಾರಿದ್ದೆಂದೆ\
ಹೌದು ಪ್ರೀತಿಯಲಿ ಕಾದ ಪ್ರೇಮದೆಣ್ಣೆ ಹಾರಿದ್ದು
ನನ್ನ ನೋವನ್ನೆಲ್ಲಾ ನಿನ್ನ ಸುಖವಾಗಿಸಿಕೊಂಡಿದ್ದೆ
ನಿನ್ನುಗುರು ನನ್ ಚರ್ಮ ಹರಿದು ನೆತ್ತರಿಳಿಸುತಿದ್ದಾಗ ನನ್ನವಳ ನೋವ ಮರೆಸು ಎಂದಿದ್ದೆ
ಪ್ರೇಮದೆಣ್ಣೆಯ ಕಾವು ಹೆಚ್ಚಾಗಿ ಇದ್ದಾಗ,
ಒದ್ದು ಹೋದೆ ನನ್ನ ಶವದಂತೆ ಮರೆತು
ಈಗ ನೀ ಇರುವ ದೇಶ ಯಾವಾನಿಗೊತ್ತು
ಕೈ ಮೇಲೆ ಗಿಲ್ಲುತಿದ್ದೋಳು ಹೃದಯಾನು ಗಿಲ್ಲಿ ಓಡಿಹೋದ್ಯಲ್ಲೇ
ನಿದ್ದೆ ಮಾಡೋವಾಗ ಮೋಹಿನಿಯು ಬಂದಂಗೆ ನನ್ನೆನಪು ಬಂದಿಲ್ವ ಯಾವತ್ತು ನಿಂಗೆ
ನಂದು ಕೂಡ ಮನಸೇ ಅಲ್ಲವೇ

5.  ಪ್ರಶಾಂತ್ ಜೋಷಿ 
  
ಮಾಸಿ ಕತ್ಲ ಹಾದಿ

ಐತವಾರ ಅಮಾಸಿ, ಹಾಲು ಹೋಳಿಗಿ ಉಂಡು ಹೊಂಟಿದ್ದೆ,
ಕತ್ಲ ಹಾದಿ, ದೆವ್ವ ಬಿಟ್ಟು ಬೇರೆ ಯಾವ ಮನಶನು ಸಿಗಲ್ಲ.
ಬಾಯಾಗ ಒಂದು ಮಸ್ತ ಗಾನ.. ಬಿಟ್ಟು ಹೊಂಟೆಲ್ಲ ನನ್ನ ಹಳ್ಳಿ......
ಹುಡುಗಿ.... ಮುಂದಿನದು ನಂಗ ಬರಲ್ಲ.. ಹುಡುಗಿ

ಬಾಯಾಗ ಬೀಡಿ, ಕೈಯಾಗ ಬ್ಯಾಟರಿ, ಸೆಲ್ಲು ವೀಕ್ ಆಗ್ಯಾವ ..
ಏನು ಕಾಣಸವಲ್ತು..
ಹೊಲ ಕಾಯದು ಅಂದ್ರ ಹಿಂಗೆ ನೋಡಪಾ
ನನ್ ಜೊತಿ ನಾನ ಮಾತಾಡಬೇಕು. ಹೊತ್ತು ಹೋಗಬೇಕಲ್ಲ

ಕಾಲಾಗ ಏನೋ ಅಡ್ಡ ಬಂತು.
ಏ.. ಹಗ್ಗನಾ?? ಪರ ಪರ ಸುತ್ತಿ ಜೋರ್ ಒಗದೆ..
ಏನೋ ಸರಕ ಸರಕ ಸೌಂಡು....
ಬಾಜು ಎಲ್ಲಮ್ಮನ ಗುಡಿ ದೀಪ ತಂದು ನೋಡಿದ್ರ.......

ಅದು ಹಗ್ಗ ಅಲ್ಲ ಲೇ..... ಹಾವ...
ಯಪ್ಪಾ... ಸ್ವಲ್ಪದ್ರಾಗೆ ಉಳಿದೆ...
ಲೇ ಬಸ್ಯಾ, ನಿಮ್ಮವ್ವ ಹಣಮವ್ವ ಭಾಳ ಪುಣ್ಯ ಮಾಡ್ಯಾಳ ಲೇ...
ಅವರವ್ವನ ನಸೀಬ್ ಚಲೋ ಆದ, ನೀ ಉಳಿದಿ ಮಗನ ಇವತ್ತ....

ಹಚ್ಚು ಮತ್ತೊಂದ್ ಬೀಡಿ...